Recipe world

Here are some recipes which I came across through the net, books, so on and few are my own experiments..

Monday, 15 August 2016

ವೆಜ್ ಪಫ್ । ಬೇಕರಿ ಸ್ಟೈಲ್ ವೆಜಿಟೆಬಲ್ ಪಫ್ಸ್

ನಾವು ಚಿಕ್ಕವರಾಗಿದ್ದ ದಿನಗಳಲ್ಲಿ ಮನೆಯಲ್ಲಿ ಬೇಕರಿ ತಿಂಡಿಗಳನ್ನು ತರುತ್ತಿದ್ದುದೇ ಅಪರೂಪವಾಗಿತ್ತು. ನಮಗೆ ಗೊತ್ತಿದ್ದ ಬೇಕರಿ ತಿನಿಸು ಎಂದರೆ ಬ್ರೆಡ್ ಒಂದೇ. ಮನೆಯಲ್ಲಿ ಓವನ್ ಇಲ್ಲದ ಕಾರಣ ಬೇಕರಿ ಖಾದ್ಯಗಳನ್ನು ಮನೆಯಲ್ಲಿ ತಯಾರಿಸುವ ಸಾಧ್ಯತೆಯೇ ಇರಲಿಲ್ಲ. ಕಾಲೇಜು ಜೀವನ ಶುರುವಾದಮೇಲೆ ಗೊತ್ತಾಗಿದ್ದು, ಪಫ್ಸ್ ಎಂಬ ಒಂದು ರುಚಿಕರವಾದ ತಿಂಡಿ ಬೇಕರಿಗಳಲ್ಲಿ ಸಿಗುತ್ತದೆ ಎಂದು! ಸಾಯಂಕಾಲದ ಹೊತ್ತು ಬೇಕರಿಗೆ ಹೋಗಿ ಬಿಸಿಬಿಸಿ ಪಫ್ಸ್ ತಿನ್ನುವ ಗಮ್ಮತ್ತೇ ಬೇರೆ. 
ಈಗ ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲೂ ಓವನ್ ಇದ್ದೇ ಇರುತ್ತದೆ. ಸುಪರ್ ಮಾರ್ಕೆಟ್ ಗೆ ಹೋಗಿ ಪಫ್ ಪೇಸ್ಟ್ರಿ ಶೀಟ್ ಗಳನ್ನು ತಂದು ಬೇಕೆಂದಾಗ ಆರಾಮಾಗಿ ಮನೆಯಲ್ಲೇ ಪಫ್ ಗಳನ್ನು ತಯಾರಿಸಿಕೊಳ್ಳಬಹುದು. ಸ್ಟಫಿಂಗ್ ಗೆ ಪಲ್ಯವೊಂದಿದ್ದರೆ ಸಾಕು, ಪಫ್ಸ್ ತಯಾರಿಸುವುದು ಬಹಳ ಸುಲಭ. ಸ್ಟಫಿಂಗ್ ಗೆ ಬೇರೆ ಬೇರೆ ಪಲ್ಯಗಳನ್ನು ಹಾಕಿ ಬಗೆಬಗೆಯ ಪಫ್ಸ್ ತಯಾರಿಸಬಹುದು. 
ವೆಜಿಟೆಬಲ್ ಪಫ್ಸ್ ತಯಾರಿಸುವ ವಿಧಾನ ಈ ಕೆಳಗಿನಂತಿದೆ.


ತಯಾರಿಸಲು ಬೇಕಾಗುವ ಸಮಯ: 30 ನಿಮಿಷಗಳು
ಬೇಕಿಂಗ್ ಟೈಮ್: 25 ನಿಮಿಷಗಳು
ಡಿಫಿಕಲ್ಟಿ ಲೆವೆಲ್: ಮೀಡಿಯಮ್
ಈ ಅಳತೆಯಿಂದ 6 ವೆಜ್ ಪಫ್ಸ್ ತಯಾರಿಸಬಹುದು

ಬೇಕಾಗುವ ಸಾಮಗ್ರಿಗಳು:

  • ಬದನೇಕಾಯಿ (ಚಿಕ್ಕದು) - 1
  • ಆಲೂಗಡ್ಡೆ / ಬಟಾಟೆ - 1 ಮೀಡಿಯಮ್ ಸೈಜಿನದು
  • ಕ್ಯಾಪ್ಸಿಕಂ - ಅರ್ಧ ಭಾಗ
  • ಬೀನ್ಸ್ - 4 ಅಥವಾ 5
  • ಹಸಿರು ಬಟಾಣಿ - 1/2 ಕಪ್ (* ಟಿಪ್ಸ್ ನೋಡಿ)
  • ಈರುಳ್ಳಿ - 1 ದೊಡ್ಡದು
  • ಉಪ್ಪು - ರುಚಿಗೆ ತಕ್ಕಷ್ಟು
  • ಆಮ್ ಚೂರ್ ಪೌಡರ್ - 1/2 ಟೀ ಸ್ಪೂನ್ ಅಥವಾ ರುಚಿಗೆ ತಕ್ಕಷ್ಟು
  • ಅಚ್ಚಮೆಣಸಿನ ಪುಡಿ - 1/2 ಟೀ ಸ್ಪೂನ್ ಅಥವಾ ರುಚಿಗೆ ತಕ್ಕಷ್ಟು
  • ಗರಮ್ ಮಸಾಲಾ ಪೌಡರ್ - 1/4 ಟೀ ಸ್ಪೂನ್
  • ಎಣ್ಣೆ - 3 ಟೇಬಲ್ ಸ್ಪೂನ್ (+ ಪಫ್ ಗೆ ಸವರಲು 2 ಟೇಬಲ್ ಸ್ಪೂನ್)
  • ಪಫ್ ಪೇಸ್ಟ್ರಿ ಶೀಟ್ - 1 1/2 (1 ಶೀಟ್ ನಿಂದ 4 ಪಫ್ಸ್ ತಯಾರಿಸಬಹುದು)


ತಯಾರಿಸುವ ವಿಧಾನ:

  • ಆಲೂಗಡ್ಡೆಯನ್ನು ಮಧ್ಯೆ ಕತ್ತರಿಸಿ ಎರಡು ಭಾಗಗಳನ್ನಾಗಿ ಮಾಡಿಕೊಳ್ಳಿ. ಇವಕ್ಕೆ ಮುಳುಗುವಷ್ಟು ನೀರು ಹಾಕಿ ಪ್ರೆಷರ್ ಕುಕ್ಕರ್ ನಲ್ಲಿ ಎರಡು ವಿಸಿಲ್ ಆಗುವವರೆಗೆ ಬೇಯಿಸಿ. ತಣ್ಣಗಾದ ನಂತರ ನೀರು ಬಸಿದು ಬಟಾಟೆಯ ಸಿಪ್ಪೆ ತೆಗೆದು ಮೀಡಿಯಂ ಅಳತೆಯ ಹೋಳುಗಳಾಗಿ ಹೆಚ್ಚಿಕೊಳ್ಳಿ.
  • ಬದನೇಕಾಯಿ, ಕ್ಯಾಪ್ಸಿಕಂ, ಬೀನ್ಸ್, ಈರುಳ್ಳಿ ಇಷ್ಟನ್ನೂ ಸಣ್ಣದಾಗಿ ಹೆಚ್ಚಿ, ಎಲ್ಲವನ್ನೂ ಪ್ರತ್ಯೇಕವಾಗಿ ಇಟ್ಟುಕೊಳ್ಳಿ.
  • ಒಂದು ದಪ್ಪ ತಳದ ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿಕೊಳ್ಳಿ. ಇದಕ್ಕೆ ಸಣ್ಣಗೆ ಹೆಚ್ಚಿದ ಬದನೆ ಮತ್ತು ಬೀನ್ಸ್ ಸೇರಿಸಿ ಮುಚ್ಚಳ ಮುಚ್ಚಿ  ಸಣ್ಣ ಉರಿಯಲ್ಲಿ ಬೇಯಿಸಿ. ಬೇಯಿಸುವಾಗ ಬೇಕಿದ್ದರೆ ಸ್ವಲ್ಪವೇ ನೀರು ಸೇರಿಸಿ.
  • ಮಿಶ್ರಣ ಮುಕ್ಕಾಲುಭಾಗ ಬೆಂದಾಗ ಇದಕ್ಕೆ ಹಸಿರು ಬಟಾಣಿ, ಹೆಚ್ಚಿದ ಕ್ಯಾಪ್ಸಿಕಂ ಸೇರಿಸಿ ಕೈಯಾಡಿಸಿ.
  • ಒಂದು ನಿಮಿಷದ ನಂತರ ಇದಕ್ಕೆ ಹೆಚ್ಚಿದ ಈರುಳ್ಳಿ ಸೇರಿಸಿ 4 - 5 ನಿಮಿಷ ಬೇಯಿಸಿ.
  • ಪಲ್ಯದ ಮಿಶ್ರಣಕ್ಕೆ ಹೆಚ್ಚಿದ ಆಲೂಗಡ್ಡೆ ಸೇರಿಸಿ ಒಮ್ಮೆ ಕೈಯಾಡಿಸಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಆಮ್ ಚೂರ್ ಪೌಡರ್, ಅಚ್ಚಮೆಣಸಿನಪುಡಿ, ಗರಂ ಮಸಾಲಾ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಉರಿಯನ್ನು ಆಫ್ ಮಾಡಿ.
  • ಓವನ್ ನ್ನು 200°C ಗೆ ಪ್ರಿ-ಹೀಟ್ ಮಾಡಿಕೊಳ್ಳಿ.
  • ಪೇಸ್ಟ್ರಿ ಶೀಟ್ ಗಳನ್ನು ಬಳಸಲು 15 - 20 ನಿಮಿಷ ಮೊದಲೇ ಫ್ರೀಜರ್ ನಿಂದ ಹೊರಗೆ ತೆಗೆದಿಟ್ಟಿರಿ.
  • ಒಂದು ಪೇಸ್ಟ್ರಿ ಶೀಟ್ ನ್ನು ತೆಗೆದುಕೊಂಡು ಒಂದೇ ಅಳತೆಯ ನಾಲ್ಕು ಚೌಕಗಳಾಗಿ ಕತ್ತರಿಸಿ. ಅದರಲ್ಲಿ ಒಂದು ಭಾಗವನ್ನು ತೆಗೆದುಕೊಂಡು ಒಂದು ಸಮತಟ್ಟಾದ ಜಾಗದಲ್ಲಿ ಇಟ್ಟುಕೊಳ್ಳಿ. ಇದರಮೇಲೆ 2 ಅಥವಾ 2 1/2 ಟೇಬಲ್ ಸ್ಪೂನ್ ನಷ್ಟು ಪಲ್ಯದ ಮಿಶ್ರಣವನ್ನು ಹಾಕಿ. ಶೀಟ್ ನ ಅಂಚುಗಳಿಗೆ ನೀರು ಸವರಿಕೊಂಡು ಪಲ್ಯ ಒಳಗೆ ಬರುವಂತೆ ಶೀಟ್ ನ್ನು ಮಡಿಚಿ ಅಂಚುಗಳನ್ನು ಪ್ರೆಸ್ ಮಾಡಿ ಕೂಡಿಸಿ.
  • ಕತ್ತರಿಸಿದ ಎಲ್ಲ ಶೀಟ್ ಗಳಲ್ಲೂ ಇದೇ ರೀತಿ ಪಲ್ಯ ಹಾಕಿ ಮಡಿಚಿ ಅಂಚುಗಳನ್ನು ಬಿಡದಂತೆ ಜೋಡಿಸಿ.
  • ಬೇಕಿಂಗ್ ಟ್ರೇ ಗೆ ಅಲ್ಯೂಮಿನಿಯಂ ಫಾಯಿಲ್ ಅಥವಾ ಬೇಕಿಂಗ್ ಶೀಟ್ ಹಾಕಿ ಅದರಮೇಲೆ ಪಲ್ಯ ತುಂಬಿದ ಎಲ್ಲ ಪೇಸ್ಟ್ರಿ ಶೀಟ್ ಗಳನ್ನೂ ಜೋಡಿಸಿಕೊಳ್ಳಿ. ಪಫ್ಸ್ ಬೇಯುವಾಗ ಹಿಗ್ಗುವುದರಿಂದ ಸ್ವಲ್ಪ ಅಂತರ ಇಟ್ಟು ಜೋಡಿಸಿ.
  • ಜೋಡಿಸಿಟ್ಟ ಪಫ್ಸ್ ಗಳಿಗೆ ಎಣ್ಣೆ ಅಥವಾ ಬೆಣ್ಣೆ ಸವರಿ, ಪ್ರಿ-ಹೀಟ್ ಮಾಡಿದ ಓವನ್ ನಲ್ಲಿ 25 ನಿಮಿಷ ಅಥವಾ ಹೊಂಬಣ್ಣಕ್ಕೆ ಬರುವವರೆಗೆ ಬೇಯಿಸಿ.
  • ಸಂಜೆಯ ಟೀ ಯೊಡನೆ ಬಿಸಿಬಿಸಿ ಪಫ್ಸ್ ತಿನ್ನಲು ಬಹಳ ಚೆನ್ನಾಗಿರುತ್ತದೆ.



ಟಿಪ್ಸ್:
  • ಒಣಗಿಸಿದ ಬಟಾಣಿ ಬಳಸುವುದಾದರೆ 4 - 5 ಘಂಟೆಕಾಲ ನೆನೆಸಿಟ್ಟು ಬಟಾಟೆ ಬೇಯಿಸುವಾಗ ಇದನ್ನೂ ಬೇಯಿಸಿಕೊಳ್ಳಿ. ನಾನು ಇಲ್ಲಿ ಫ್ರೆಶ್ ಆಗಿ ಸಿಗುವ ಹಸಿರು ಬಟಾಣಿ ಬಳಸಿರುವುದರಿಂದ ಬೇಯಿಸುವ ಅಗತ್ಯವಿಲ್ಲ.
  • ಸ್ಟಫಿಂಗ್ ಗೆ ನೀರಿನಂಶ ಕಡಿಮೆ ಇರುವ ನಿಮ್ಮಿಷ್ಟದ ಯಾವುದೇ ತರಕಾರಿಗಳನ್ನು ಬಳಸಬಹುದು. ಕ್ಯಾರೆಟ್, ಬೀಟ್ ರೂಟ್, ಸ್ವೀಟ್ ಕಾರ್ನ್, ಕ್ಯಾಬೇಜ್ ಇತ್ಯಾದಿ ತರಕಾರಿಗಳನ್ನು ಹಾಕಿದರೂ ಚೆನ್ನಾಗಿರುತ್ತದೆ. ಮನೆಯಲ್ಲಿ ಚಪಾತಿಗೆ ತಯಾರಿಸಿದ ಪಲ್ಯ ಮಿಕ್ಕಿದ್ದರೆ ಅದನ್ನೂ ಬಳಸಬಹುದು!

English version

Wednesday, 27 July 2016

ಕೆಸುವಿನ ದಂಟಿನ ದೋಸೆ । ಕೆಸುವಿನ ದಡಿ ದೋಸೆ | ಕೆಸುವಿನ ದೊಡ್ನ

ನಮ್ಮೂರ ಕಡೆ ಬೆಳಗ್ಗಿನ ತಿಂಡಿಗೆ ಥರಾವರಿ ದೋಸೆಗಳನ್ನು ತಯಾರಿಸುತ್ತಾರೆ. ಹಳ್ಳಿಗಳ ಕಡೆ ಸಿಗುವ ಅನೇಕ ಬಗೆಯ ಸೊಪ್ಪು-ತರಕಾರಿಗಳನ್ನು ದೋಸೆ ತಯಾರಿಸಲು ಬಳಸುತ್ತಾರೆ. ಮಳೆಗಾಲದಲ್ಲಿ ಎಲ್ಲೆಡೆ ಬೆಳೆಯುವ ಕೆಸುವಿನ ದಂಟು ಬಳಸಿ ರುಚಿಕರವಾದ ದೋಸೆ ತಯಾರಿಸಬಹುದು. ಊರಲ್ಲಿ ನಮ್ಮ ಮನೆಯಲ್ಲಿ ಪ್ರತಿ ವರ್ಷವೂ ಗಂಗಾಷ್ಟಮಿ ಹಬ್ಬಕ್ಕೆ ಕೆಸುವಿನ ದಂಟಿನ ದೋಸೆ ಮಾಡುತ್ತಾರೆ.
ಇಲ್ಲಿ ಆಸ್ಟ್ರೇಲಿಯಾದಲ್ಲಿ ನಮಗೆ ಫಾರ್ಮರ್ಸ್ ಮಾರ್ಕೆಟ್ ಗೆ ಹೋದಾಗ ಕೆಲವೊಮ್ಮೆ ಕೆಸುವಿನ ಗಿಡಗಳು ಸಿಗುತ್ತವೆ. ಅವನ್ನು ತಂದಾಗ ನಮ್ಮ ಮನೆಯಲ್ಲಿ ಕೆಸುವಿನ ದಂಟಿನ ದೋಸೆ ತಯಾರಾಗುತ್ತದೆ. ಸಿಹಿಯಾದ ದೋಸೆಯ ಜೊತೆ ಬೆಣ್ಣೆ ಹಾಕಿಕೊಂಡು ತಿಂದರೆ ಬಹಳ ರುಚಿ!


ತಯಾರಿಸಲು ಬೇಕಾಗುವ ಸಮಯ: 15 ನಿಮಿಷಗಳು
ಅಕ್ಕಿ/ಹಿಟ್ಟು ನೆನೆಹಾಕುವ ಸಮಯ: 4 - 5 ಘಂಟೆ
ಡಿಫಿಕಲ್ಟಿ ಲೆವೆಲ್: ಮೀಡಿಯಮ್
ಈ ಅಳತೆಯಿಂದ 10 - 11 ದೋಸೆಗಳನ್ನು ತಯಾರಿಸಬಹುದು

ಬೇಕಾಗುವ ಸಾಮಗ್ರಿಗಳು:

  • ಅಕ್ಕಿ - 3 ಕಪ್ (1 ಕಪ್ = 110 ಗ್ರಾಮ್)
  • ಮೀಡಿಯಮ್ ಸೈಜಿಗೆ ಹೆಚ್ಚಿದ ಕೆಸುವಿನ ದಂಟು - 7 ಕಪ್ ಅಥವಾ ಸ್ವಲ್ಪ ಜಾಸ್ತಿ 
  • ಬೆಲ್ಲ - 1/2 ಕಪ್ ಅಥವಾ ರುಚಿಗೆ ತಕ್ಕಷ್ಟು 
  • ಉಪ್ಪು - ರುಚಿಗೆ ತಕ್ಕಷ್ಟು  

ತಯಾರಿಸುವ ವಿಧಾನ:

  • ಅಕ್ಕಿಯನ್ನು ತೊಳೆದು 2 - 3 ಘಂಟೆಕಾಲ ನೆನೆಸಿಡಿ. 
  • ಕೆಸುವಿನ ದಂಟನ್ನು ಮೀಡಿಯಮ್ ಸೈಜಿನ ಹೋಳುಗಳಾಗಿ ಹೆಚ್ಚಿಕೊಳ್ಳಿ. 
  • ಈ ಹೋಳುಗಳನ್ನು ಒಂದು ಪಾತ್ರೆಯಲ್ಲಿ ಹಾಕಿ ಉಪ್ಪು, ಬೆಲ್ಲ ಸೇರಿಸಿ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಮೆತ್ತಗಾಗುವವರೆಗೆ ಬೇಯಿಸಿ. ಬೇಯಿಸಲು ನೀರು ಸೇರಿಸಬೇಡಿ, ಕೆಸುವಿನ ದಂಟಿನಲ್ಲಿರುವ ನೀರಿನಂಶವೇ ಹೋಳು ಬೇಯಲು ಸಾಕಾಗುತ್ತದೆ.  
  • ಬೇಯಿಸಿದ ಹೋಳಿನ ಮಿಶ್ರಣ ತಣ್ಣಗಾದ ನಂತರ ಇದಕ್ಕೆ ನೀರು ಬಸಿದ ಅಕ್ಕಿಯನ್ನು ಸೇರಿಸಿ ನುಣ್ಣಗೆ ರುಬ್ಬಿ. ರುಬ್ಬುವಾಗಲೂ ನೀರು ಸೇರಿಸಬೇಡಿ; ಕೆಸುವಿನ ಮಿಶ್ರಣ ನೀರಾಗಿರುವುದರಿಂದ ಅದರಲ್ಲೇ ಅಕ್ಕಿ ರುಬ್ಬಬಹುದು. 
  • ತಯಾರಾದ ಹಿಟ್ಟನ್ನು 1 - 2 ಘಂಟೆಕಾಲ ಹಾಗೇ ಸೆಟ್ ಆಗಲು ಬಿಡಿ. 
  • ನಂತರ ಬಿಸಿ ಕಾವಲಿಯಮೇಲೆ ಒಂದು ಸೌಟಿನಷ್ಟು ಹಿಟ್ಟನ್ನು ಹಾಕಿ ಸಣ್ಣ ವೃತ್ತಾಕಾರಕ್ಕೆ ಹರವಿ ಎರಡೂ ಕಡೆ ಬೇಯಿಸಿ. ದೋಸೆ ಕಾವಲಿಗೆ ಅಂಟದಂತೆ ಬೇಯಿಸುವಾಗ ನಾಲ್ಕೈದು ಹನಿ ಎಣ್ಣೆ ಹಾಕಿ.  
  • ಬಿಸಿಬಿಸಿ ದೋಸೆಯನ್ನು ಬೆಣ್ಣೆ ಹಾಕಿಕೊಂಡು ತಿನ್ನಿ!


English version

Monday, 4 July 2016

ಬೇಸನ್ ಲಾಡು । ಕಡ್ಲೆಹಿಟ್ಟಿನ ಲಾಡು

ಹಬ್ಬ ಹಾಗೂ ವಿಶೇಷ ಸಮಾರಂಭಗಳಲ್ಲಿ ಸಾಮಾನ್ಯವಾಗಿ ತಯಾರಿಸುವ ಸಿಹಿತಿಂಡಿಗಳ ಸಾಲಿನಲ್ಲಿ ಬೇಸನ್ ಲಾಡು ಕೂಡ ಒಂದು. ಬಾಯಲ್ಲಿಟ್ಟರೆ ಕರಗುವ ಈ ಲಾಡು ನಮ್ಮ ಮನೆಯಲ್ಲಿ ಎಲ್ಲರಿಗೂ ಇಷ್ಟ! ತುಪ್ಪ, ಸಕ್ಕರೆ, ಡ್ರೈ ಫ್ರೂಟ್ಸ್ ಎಲ್ಲವನ್ನೂ ಧಾರಾಳವಾಗಿ ಬಳಸಿ ತಯಾರಿಸುವ ಬೇಸನ್ ಲಾಡು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು. ಹಬ್ಬ - ಹರಿದಿನಗಳಲ್ಲಿ, ಮನೆಗೆ ಅತಿಥಿಗಳು ಬಂದಾಗ ತಯಾರಿಸಲು ಈ ಲಾಡು ಚೆನ್ನಾಗಿರುತ್ತದೆ.


ತಯಾರಿಸಲು ಬೇಕಾಗುವ ಸಮಯ: 40 ನಿಮಿಷಗಳು
ಡಿಫಿಕಲ್ಟಿ ಲೆವೆಲ್: ಮೀಡಿಯಮ್
ಈ ಅಳತೆಯಿಂದ 8 ಲಾಡುಗಳನ್ನು ತಯಾರಿಸಬಹುದು

ಬೇಕಾಗುವ ಸಾಮಗ್ರಿಗಳು:

  • ಕಡ್ಲೆಹಿಟ್ಟು - 2 ಕಪ್ (1 ಕಪ್ = 125 ಗ್ರಾಮ್)
  • ಸಕ್ಕರೆ - 1 ಕಪ್ 
  • ತುಪ್ಪ - 3/4 ಕಪ್ ಗಿಂತ 1 ಟೇಬಲ್ ಸ್ಪೂನ್ ಕಮ್ಮಿ 
  • ಏಲಕ್ಕಿಪುಡಿ - 1 ಟೀ ಸ್ಪೂನ್ (ಟಿಪ್ಸ್ ನೋಡಿ)
  • ಒಣದ್ರಾಕ್ಷಿ - 15
  • ಗೋಡಂಬಿ ಚೂರು - 2 ಟೇಬಲ್ ಸ್ಪೂನ್ 


ತಯಾರಿಸುವ ವಿಧಾನ:

  • ಒಂದು ದಪ್ಪ ತಳದ ಬಾಣಲೆಯಲ್ಲಿ ಕಡ್ಲೆಹಿಟ್ಟಿಗೆ ಮೇಲೆ ಹೇಳಿದಷ್ಟು ತುಪ್ಪ ಸೇರಿಸಿ ಸಣ್ಣ ಉರಿಯಲ್ಲಿ ಚೆನ್ನಾಗಿ ಪರಿಮಳ ಬರುವಂತೆ ಹುರಿಯಿರಿ. 
  • ಹಿಟ್ಟು ಅರ್ಧದಷ್ಟು ಹುರಿದನಂತರ ಇದಕ್ಕೆ ದ್ರಾಕ್ಷಿ, ಗೋಡಂಬಿ ಚೂರುಗಳನ್ನು ಸೇರಿಸಿ ಎಲ್ಲವನ್ನೂ ಒಟ್ಟಿಗೇ ಹುರಿಯಿರಿ. ಇಲ್ಲವೇ ಇವನ್ನು ಪ್ರತ್ಯೇಕವಾಗಿ ಹುರಿದು ಸೇರಿಸಿದರೂ ಆಯಿತು. 
  • ಸಕ್ಕರೆಯನ್ನು ಮಿಕ್ಸಿಯಲ್ಲಿ ನುಣ್ಣಗೆ ಪುಡಿಮಾಡಿಕೊಳ್ಳಿ. 
  • ಹುರಿದ ಹಿಟ್ಟನ್ನು ಸ್ವಲ್ಪ ಸಮಯ ತಣಿಯಲು ಬಿಡಿ. ಹಿಟ್ಟು ಉಗುರುಬೆಚ್ಚಗೆ ಇರುವಾಗ ಇದಕ್ಕೆ ಸಕ್ಕರೆಪುಡಿ, ಏಲಕ್ಕಿಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. 
  • ತಯಾರಾದ ಹಿಟ್ಟಿನಿಂದ ಒಂದೇ ಅಳತೆಯ ಉಂಡೆಗಳನ್ನು ಮಾಡಿ. 



ಟಿಪ್ಸ್:

  • ಹಿಟ್ಟಿಗೆ ತುಪ್ಪ ಜಾಸ್ತಿ ಹಾಕಿದರೆ ಮೆತ್ತಗಾಗಿಬಿಡುತ್ತದೆ. ಹೀಗಾದರೆ ಉಂಡೆಗಳನ್ನು ಕಟ್ಟಿದ ತಕ್ಷಣ 15 - 20 ನಿಮಿಷ ಫ್ರಿಜ್ ನಲ್ಲಿಟ್ಟು ತೆಗೆಯಿರಿ. ಹೀಗೆ ಮಾಡುವುದರಿಂದ ಉಂಡೆಗಳು ಗಟ್ಟಿಯಾಗುತ್ತವೆ. 
  • ಏಲಕ್ಕಿಪುಡಿ ಇಲ್ಲದಿದ್ದರೆ ಸಕ್ಕರೆಯೊಡನೆ ಏಲಕ್ಕಿಯನ್ನೂ ಸೇರಿಸಿ ಪುಡಿಮಾಡಿಕೊಳ್ಳಿ. 


English version

Friday, 10 June 2016

ಮಾವಿನಹಣ್ಣಿನ ನೀರ್ ಗೊಜ್ಜು

ಈಗ ಬೇಸಿಗೆ, ಮಾವಿನ ಸೀಜನ್! ಈ ವರ್ಷ ಮಾವಿನ ಫಸಲು ಚೆನ್ನಾಗಿರುವುದರಿಂದ ಎಲ್ಲರ ಮನೆಯಲ್ಲೂ ಬೇರೆಬೇರೆ ವೆರೈಟಿಯ ಮಾವಿನ ಹಣ್ಣುಗಳನ್ನು ಕಾಣಬಹುದು. ಊರಲ್ಲಿ ನಮ್ಮ ಮನೆಯಲ್ಲಂತೂ ದಿನವೂ ಊಟಕ್ಕೆ ಮಾವಿನಕಾಯಿ ಅಥವಾ ಮಾವಿನಹಣ್ಣಿನ ಒಂದು ಅಡುಗೆಯಾದರೂ ಇದ್ದೇ ಇರುತ್ತದೆ. 
ಹಳ್ಳಿಗಳ ಕಡೆ ಸಿಗುವ 'ಸಾಸಿವೆ ಮಾವಿನಹಣ್ಣು' ಸಿಹಿ - ಹುಳಿ ರುಚಿ ಹೊಂದಿದ್ದು ಅಡುಗೆಗೆ ಬಳಸಲು ಚೆನ್ನಾಗಿರುತ್ತದೆ.  ಸಾಸಿವೆ, ನೀರ್ ಗೊಜ್ಜು ಇತ್ಯಾದಿ ಅಡುಗೆಗಳಿಗೆ ಸಾಸಿವೆ ಮಾವಿನಹಣ್ಣು ಇದ್ದರೇನೇ ಚೆನ್ನ! ಮಾವಿನಹಣ್ಣಿನ ನೀರ್ಗೊಜ್ಜು ತಯಾರಿಸುವ ವಿಧಾನ ಈ ಕೆಳಗಿನಂತಿದೆ..


ತಯಾರಿಸಲು ಬೇಕಾಗುವ ಸಮಯ: 20 ನಿಮಿಷಗಳು
ಸರ್ವಿಂಗ್ಸ್: 4 ಜನರಿಗೆ ಆಗುತ್ತದೆ
ಡಿಫಿಕಲ್ಟಿ ಲೆವೆಲ್: ಮೀಡಿಯಂ

ಬೇಕಾಗುವ ಸಾಮಗ್ರಿಗಳು:

  • ಸಾಸಿವೆ ಮಾವಿನಹಣ್ಣು (ಅಥವಾ ಸಣ್ಣ ಮಾವಿನಹಣ್ಣು) - 5 ಅಥವಾ 6
  • ಜೋನಿ ಬೆಲ್ಲ - 7 ಟೇಬಲ್ ಸ್ಪೂನ್ ಅಥವಾ ಸಿಹಿಯಾಗುವಷ್ಟು  
  • ಉಪ್ಪು - 1 1/4 ಟೀ ಸ್ಪೂನ್ ಅಥವಾ ರುಚಿಗೆ ತಕ್ಕಷ್ಟು 
  • ನೀರು - 2 ಕಪ್ 

ಒಗ್ಗರಣೆಗೆ: ಎಣ್ಣೆ - 3 ಟೀ ಸ್ಪೂನ್, ಒಣಮೆಣಸು - 1, ಉದ್ದಿನಬೇಳೆ - 1 ಟೀ ಸ್ಪೂನ್, ಸಾಸಿವೆ - 1 1/4 ಟೀ ಸ್ಪೂನ್, ಇಂಗು - ಚಿಟಿಕೆ, ಹಸಿಮೆಣಸು - 1, ಕರಿಬೇವು - 4 ಎಲೆಗಳು

ತಯಾರಿಸುವ ವಿಧಾನ:

  • ಮಾವಿನಹಣ್ಣು ನೀರಿನಲ್ಲಿ ಸ್ವಚ್ಛವಾಗಿ ತೊಳೆದುಕೊಂಡು ಸಿಪ್ಪೆ ಬಿಡಿಸಿ ಒಂದು ಪಾತ್ರೆಯಲ್ಲಿ ಹಾಕಿಕೊಳ್ಳಿ. 
  • ಇದಕ್ಕೆ ಉಪ್ಪು, ಬೆಲ್ಲ ಸೇರಿಸಿ ಕೈಯಲ್ಲಿ ಚೆನ್ನಾಗಿ ಕಿವುಚಿ. ಮಿಶ್ರಣಕ್ಕೆ 2 ಕಪ್ ನಷ್ಟು ನೀರು ಸೇರಿಸಿಕೊಂಡು ಮಿಕ್ಸ್ ಮಾಡಿ 10 ನಿಮಿಷ ಹಾಗೆಯೇ ಇಡಿ. ನಂತರ ರುಚಿ ನೋಡಿಕೊಂಡು ಉಪ್ಪು, ಬೆಲ್ಲ ಏನಾದರೂ ಬೇಕಿದ್ದರೆ ಸೇರಿಸಿ. 
  • ಒಗ್ಗರಣೆ ಸೌಟಿನಲ್ಲಿ ಎಣ್ಣೆ ಕಾಯಿಸಿ ಒಣಮೆಣಸು, ಉದ್ದಿನಬೇಳೆ, ಸಾಸಿವೆ, ಇಂಗು ಸೇರಿಸಿ ಕೈಯಾಡಿಸಿ. ಸಾಸಿವೆ ಚಟಪಟ ಎಂದನಂತರ ಕರಿಬೇವು, ಸೀಳಿದ ಹಸಿಮೆಣಸು ಸೇರಿಸಿ ಒಂದು ನಿಮಿಷ ಕೈಯಾಡಿಸಿ ಒಲೆಯಿಂದ ಇಳಿಸಿ. ಒಗ್ಗರಣೆ ಮಿಶ್ರಣವನ್ನು ಕಿವುಚಿದ ಮಾವಿನಹಣ್ಣಿಗೆ ಸೇರಿಸಿ ಮಿಕ್ಸ್ ಮಾಡಿ. 
  • ಸಿಹಿ - ಹುಳಿಯಾದ ನೀರ್ಗೊಜ್ಜನ್ನು ಅನ್ನದೊಡನೆ ಸವಿಯಿರಿ!

English version

Friday, 20 May 2016

ನೆಲ್ಲಿಕಾಯಿ ಉಪ್ಪಿನಕಾಯಿ

ದಿನಕ್ಕೊಂದು ನೆಲ್ಲಿಕಾಯಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ. ಆರೋಗ್ಯಕ್ಕೆ ಹಿತಕರವಾದ ನೆಲ್ಲಿಕಾಯಿ ಉಪ್ಪಿನಕಾಯಿ, ಮುರಬ್ಬ, ಚ್ಯವನ್ ಪ್ರಾಶ್, ನೀರುನೆಲ್ಲಿಕಾಯಿ, ಜ್ಯೂಸ್, ನೆಲ್ಲಿಸಟ್ಟು, ಚಟ್ನಿ, ತಂಬ್ಳಿ ಇತ್ಯಾದಿಗಳ ತಯಾರಿಕೆಗೆ ಪ್ರಶಸ್ತವಾಗಿದೆ. ಆಯುರ್ವೇದದಲ್ಲಿಯೂ ನೆಲ್ಲಿಕಾಯಿಗೆ ಪ್ರಮುಖ ಸ್ಥಾನವಿದೆ. ಕೂದಲು ಮತ್ತು ಚರ್ಮದ ಉತ್ತಮ ಬೆಳವಣಿಗೆಗೆ ನೆಲ್ಲಿಕಾಯಿ ಸಹಕಾರಿ. ಅಜೀರ್ಣ ಇತ್ಯಾದಿ ಹೊಟ್ಟೆಯ ತೊಂದರೆಗಳಿಗೆ ನೆಲ್ಲಿಕಾಯಿಯ ಸೇವನೆ ಬಹಳ ಒಳ್ಳೆಯದು. 
ನಾವೆಲ್ಲ ಚಿಕ್ಕವರಿದ್ದಾಗ ಬೆಟ್ಟದ ನೆಲ್ಲಿಕಾಯನ್ನು ಕೊಯ್ದು ತಂದು ಉಪ್ಪು, ಮೆಣಸು ಜಜ್ಜಿಹಾಕಿದ ನೀರಿನಲ್ಲಿ ಅದನ್ನು ಮುಳುಗಿಸಿ ಇಡುತ್ತಿದ್ದೆವು. ಉಪ್ಪು, ಖಾರ ಕುಡಿದ ಆ ನೆಲ್ಲಿಕಾಯಿಗಳು ತಿನ್ನಲು ಅದೆಷ್ಟು ರುಚಿ! ಉಪ್ಪುನೀರಿನಲ್ಲಿ ಹಾಕಿದ ನೆಲ್ಲಿಕಾಯಿಗಳನ್ನು ತಿನ್ನದೆ ವರ್ಷಗಳೇ ಕಳೆದುಹೋಗಿವೆ. 
ನೆಲ್ಲಿಕಾಯಿ ಉಪ್ಪಿನಕಾಯಿ ತಯಾರಿಸುವ ವಿಧಾನವನ್ನು ಬ್ಲಾಗ್ ನಲ್ಲಿ ಬರೆಯಲು ನನ್ನ ಫ್ರೆಂಡ್ ಒಬ್ಬರು ಕೆಲದಿನಗಳ ಹಿಂದೆ ಹೇಳಿದ್ದರು. ಉಪ್ಪಿನಕಾಯಿ ತಯಾರಿಸಿ ಫೋಟೋ ಕ್ಲಿಕ್ಕಿಸಿದ್ದರೂ ಊರಿನ ಪ್ರವಾಸದ ಗಡಿಬಿಡಿಯಲ್ಲಿ ಬ್ಲಾಗ್ ಕಡೆ ಗಮನ ಕೊಡಲು ಸಾಧ್ಯವಾಗಲೇ ಇಲ್ಲ. ಕೊನೆಗೂ ಬಿಡುವು ಮಾಡಿಕೊಂಡು ರೆಸಿಪಿಯನ್ನು ಹಾಕುತ್ತಿದ್ದೇನೆ..ಇನ್ನೂ ಕೆಲವು ರೆಸಿಪಿ ಫೋಟೋಗಳು ಬರವಣಿಗೆಗಾಗಿ ಕಾದು ಕುಳಿತಿವೆ. ಆದಷ್ಟು ಬೇಗ ಅವನ್ನೆಲ್ಲ ನಿಮ್ಮೊಡನೆ ಹಂಚಿಕೊಳ್ಳುವ ಇರಾದೆ ನನ್ನದು. ಯಾವುದಕ್ಕೂ ಕಾದುನೋಡಿ!


ತಯಾರಿಸಲು ಬೇಕಾಗುವ ಸಮಯ: 35 - 40 ನಿಮಿಷಗಳು
ಡಿಫಿಕಲ್ಟಿ ಲೆವೆಲ್: ಮೀಡಿಯಮ್
ಈ ಅಳತೆಯಿಂದ 400ರಿಂದ 450 ಗ್ರಾಂ ನಷ್ಟು ಉಪ್ಪಿನಕಾಯಿ ತಯಾರಿಸಬಹುದು

ಬೇಕಾಗುವ ಸಾಮಗ್ರಿಗಳು:

  • ನೆಲ್ಲಿಕಾಯಿ - 340 ಗ್ರಾಂ (14 - 15 ದೊಡ್ಡ ಸೈಜಿನ ನೆಲ್ಲಿಕಾಯಿಗಳು)
  • ನೀರು - 2 ಕಪ್ (1 ಕಪ್ = 180 ml)
  • ಉಪ್ಪು - 10 ಟೇಬಲ್ ಸ್ಪೂನ್ (ಅಂದಾಜು)
  • ಇಂಗು - 1/2 ಟೀ ಸ್ಪೂನ್ 
  • ಜೀರಿಗೆ - 1 1/2 ಟೀ ಸ್ಪೂನ್ 
  • ಅರಿಶಿನ - 1/2 ಟೀ ಸ್ಪೂನ್ 
  • ಸಾಸಿವೆ - 3 1/2 ಟೀ ಸ್ಪೂನ್ 
  • ಅಚ್ಚಮೆಣಸಿನ ಪುಡಿ - 6 ಟೇಬಲ್ ಸ್ಪೂನ್ (ಖಾರಕ್ಕೆ ತಕ್ಕಂತೆ)
  • ನಿಂಬೆಹಣ್ಣು - 1 ದೊಡ್ಡದು 

ಒಗ್ಗರಣೆಗೆ: ಎಣ್ಣೆ - 5 ಟೇಬಲ್ ಸ್ಪೂನ್, ಸಾಸಿವೆ - 1 ಟೀ ಸ್ಪೂನ್, ಇಂಗು - ದೊಡ್ಡ ಚಿಟಿಕೆ

ತಯಾರಿಸುವ ವಿಧಾನ:

  • ಎರಡು ಕಪ್ ನಷ್ಟು ನೀರಿಗೆ 4 ಟೇಬಲ್ ಸ್ಪೂನ್ ನಷ್ಟು ಉಪ್ಪು ಸೇರಿಸಿ ಬಿಸಿಗಿಡಿ. ಇದು 4 - 5 ನಿಮಿಷ ಚೆನ್ನಾಗಿ ಕುದಿದ ನಂತರ ನೆಲ್ಲಿಕಾಯಿಗಳನ್ನು ಕುದಿಯುತ್ತಿರುವ ನೀರಿಗೆ ಸೇರಿಸಿ. ಇದನ್ನು 4ರಿಂದ 5 ನಿಮಿಷ ಅಥವಾ ನೆಲ್ಲಿಕಾಯಿ ಬೇಯುವವರೆಗೆ ಕುದಿಸಿ ಉರಿ ಆಫ್ ಮಾಡಿ. ಪಾತ್ರೆಗೆ ಮುಚ್ಚಳ ಮುಚ್ಚಿ ತಣ್ಣಗಾಗಲು ಬಿಡಿ. 
  • ಜೀರಿಗೆ, ಸಾಸಿವೆ ಹಾಗೂ ಇಂಗು ಇಷ್ಟನ್ನೂ ಎಣ್ಣೆ ಹಾಕದೆ, ಪರಿಮಳ ಬರುವಂತೆ ಹುರಿದುಕೊಳ್ಳಿ. ಕೊನೆಯಲ್ಲಿ ಅರಿಶಿನ ಸೇರಿಸಿ ಉರಿಯನ್ನು ಆಫ್ ಮಾಡಿ. ತಣ್ಣಗಾದ ನಂತರ ಇದಕ್ಕೆ 2 ಟೀ ಸ್ಪೂನ್ ನಷ್ಟು ಉಪ್ಪು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ಪುಡಿಮಾಡಿ. 
  • ನೆಲ್ಲಿಕಾಯಿ ತಣ್ಣಗಾದ ನಂತರ ನೀರಿನಿಂದ ತೆಗೆದು ಚಾಕುವಿನಿಂದ ಕತ್ತರಿಸಿ ಬೀಜವನ್ನು ಬೇರ್ಪಡಿಸಿ. 
  • ಚೂರುಮಾಡಿದ ನೆಲ್ಲಿಕಾಯಿಗೆ ಮೇಲೆ ಮೊದಲೇ ತಯಾರಿಸಿಟ್ಟ ಮಸಾಲೆಪುಡಿ, ಅಚ್ಚಮೆಣಸಿನಪುಡಿ ಸೇರಿಸಿ. ಜೊತೆಗೆ 7 ಟೇಬಲ್ ಸ್ಪೂನ್ ನಷ್ಟು ಉಪ್ಪುನೀರು (ನೆಲ್ಲಿಕಾಯಿ ಬೇಯಿಸಿದ ನೀರು), ನಿಂಬೆರಸ  ಸೇರಿಸಿ ಮಿಕ್ಸ್ ಮಾಡಿ. ರುಚಿ ನೋಡಿಕೊಂಡು ಉಪ್ಪು, ಖಾರ ಬೇಕಿದ್ದರೆ ಸೇರಿಸಿ. 
  • ಎಣ್ಣೆ ಕಾಯಿಸಿ ಸಾಸಿವೆ, ಇಂಗಿನ ಒಗ್ಗರಣೆ ಮಾಡಿ. ತಣ್ಣಗಾದ ನಂತರ ಉಪ್ಪಿನಕಾಯಿಗೆ ಸೇರಿಸಿ ಮಿಕ್ಸ್ ಮಾಡಿ. 
  • ಮೊಸರನ್ನದೊಡನೆ ನೆಲ್ಲಿಕಾಯಿ ಉಪ್ಪಿನಕಾಯಿ ಒಳ್ಳೆಯ ಕಾಂಬಿನೇಶನ್!


ಟಿಪ್ಸ್:

  • ಫ್ರೆಶ್ ನೆಲ್ಲಿಕಾಯಿ ಸಿಗದಿದ್ದರೆ ಫ್ರೋಜನ್ ನೆಲ್ಲಿಕಾಯಿ ಬಳಸಿದರೂ ಆಗುತ್ತದೆ. ನಾನು ಇಲ್ಲಿ ಫ್ರೋಜನ್ ನೆಲ್ಲಿಕಾಯಿಗಳನ್ನು ಬಳಸಿದ್ದೇನೆ. 

English version
Related Posts Plugin for WordPress, Blogger...