ಕಡಿಗಾಯಿ (ಮಾವಿನಕಾಯಿ) ಉಪ್ಪಿನಕಾಯಿ / Kadigayi (Raw Mango) Pickle

Click here for English version.

ಮಾವಿನಕಾಯಿ ಸೀಸನ್ ಶುರುವಾದರೆ ಸಾಕು, ಮಲೆನಾಡಿನ ಮನೆಗಳಲ್ಲಿ ಥರಾವರಿ ಉಪ್ಪಿನಕಾಯಿಗಳನ್ನು ತಯಾರಿಸುತ್ತಾರೆ. ಮಲೆನಾಡಿನ ಸ್ಪೆಷಲ್ ಉಪ್ಪಿನಕಾಯಿಗಳಲ್ಲಿ ಕಡಿಗಾಯಿ ಉಪ್ಪಿನಕಾಯಿಯೂ ಒಂದು. ಹುಳಿ ಇರುವ ಯಾವುದೇ ಬಗೆಯ ಮಾವಿನಕಾಯಿ ಬಳಸಿ ಈ ಉಪ್ಪಿನಕಾಯಿ ತಯಾರಿಸಬಹುದು. ಆದರೆ ಈ ಉಪ್ಪಿನಕಾಯಿಯನ್ನು ವರ್ಷಗಟ್ಟಲೆ ಇಡುವಂತಿಲ್ಲ, ಮಾಡಿದ ಒಂದೆರಡು ತಿಂಗಳೊಳಗೆ ಖಾಲಿ ಮಾಡಿಬಿಡಬೇಕು. ಊಟಕ್ಕೆ ಈ ಉಪ್ಪಿನಕಾಯಿ ಒಂದಿದ್ದರೆ ಸಾಕು, ಬರೀ ಮೊಸರನ್ನವೂ ಬಹಳ ರುಚಿ ಎನ್ನಿಸುತ್ತದೆ!  


ತಯಾರಿಸಲು ಬೇಕಾಗುವ ಸಮಯ: 30 ನಿಮಿಷಗಳು 
ಸೆಟ್ ಆಗಲು ಬೇಕಾಗುವ ಅವಧಿ: 4 ದಿನಗಳು 

ಬೇಕಾಗುವ ಸಾಮಗ್ರಿಗಳು:
1 ದೊಡ್ಡ ಮಾವಿನಕಾಯಿ 
ಲವಂಗ - 4 
ಕಾಳುಮೆಣಸು - 10
ಮೆಂತ್ಯ - 1/2 + 1/4 ಚಮಚ
ಸಾಸಿವೆ - 1 1/2 + 3/4 ಚಮಚ 
ಜೀರಿಗೆ - 1 + 1/4 ಚಮಚ 
ಇಂಗು - ದೊಡ್ಡ ಚಿಟಿಕೆ 
ಎಣ್ಣೆ - 2 ಚಮಚ
ಅಚ್ಚಮೆಣಸಿನಪುಡಿ - 8 ಚಮಚ (ಖಾರಕ್ಕೆ ತಕ್ಕಂತೆ)
ಉಪ್ಪು - 9 + 2 ಚಮಚ ಅಥವಾ ರುಚಿಗೆ ತಕ್ಕಷ್ಟು 

ಒಗ್ಗರಣೆಗೆ: ಎಣ್ಣೆ 7 - 8 ಚಮಚ, ಮೆಂತ್ಯ - 1/2 ಚಮಚ, ಸಾಸಿವೆ - 2 ಚಮಚ, ಪುಡಿ ಇಂಗು - 1/2 ಚಮಚ, ಚಿಟಿಕೆ ಅರಿಶಿನ 


ಮಾಡುವ ವಿಧಾನ:
ಮಾವಿನಕಾಯಿಯನ್ನು ತೊಳೆದು ಒರೆಸಿಕೊಂಡು, ಸಾಧಾರಣ ಗಾತ್ರದ ಹೋಳುಗಳಾಗಿ ಹೆಚ್ಚಿಕೊಳ್ಳಿ. ಹೆಚ್ಚಿದ ಮಾವಿನಕಾಯಿ ಹೋಳುಗಳನ್ನು ಒಂದು ಬೌಲ್ ನಲ್ಲಿ ಹಾಕಿ ಅದಕ್ಕೆ 2 ಚಮಚ ಉಪ್ಪು, 2 ಚಮಚ ಎಣ್ಣೆ ಸೇರಿಸಿ ಮಿಕ್ಸ್ ಮಾಡಿ 2 ಘಂಟೆ ನೆನೆಯಲು ಬಿಡಿ.
 
ಅಷ್ಟರಲ್ಲಿ ಮಸಾಲೆ ಪೌಡರ್ ತಯಾರಿಸಿಕೊಳ್ಳಿ. ಕಾಳುಮೆಣಸನ್ನು ಚಟಪಟ ಎನ್ನುವವರೆಗೆ ಹುರಿದುಕೊಳ್ಳಿ. ಲವಂಗ, ಮೆಂತ್ಯ ಮತ್ತು  ಜೀರಿಗೆಯನ್ನು ಪರಿಮಳ ಬರುವವರೆಗೆ ಹುರಿದುಕೊಳ್ಳಿ. ಎಲ್ಲ ಸಾಮಗ್ರಿಗಳನ್ನೂ ಪ್ರತ್ಯೇಕವಾಗಿ ಹುರಿದುಕೊಳ್ಳಿ. ಸಾಸಿವೆಯನ್ನು ಚಟಪಟ ಎನ್ನುವವರೆಗೆ ಹುರಿದುಕೊಳ್ಳಿ.
 
ನಂತರ ಹುರಿದ ಎಲ್ಲ ಸಾಮಗ್ರಿಗಳನ್ನೂ ಸೇರಿಸಿ, ಜೊತೆಗೆ ಇಂಗು ಸೇರಿಸಿ. ಇದರೊಡನೆ 1/4 ಚಮಚ ಮೆಂತ್ಯ, 1/4 ಚಮಚ ಜೀರಿಗೆ, 3/4 ಚಮಚ ಸಾಸಿವೆ ಇಷ್ಟನ್ನೂ ಹುರಿಯದೆ ಹಸಿಯಾಗೇ ಸೇರಿಸಿ. ಈ ಎಲ್ಲ ಸಾಮಗ್ರಿಗಳನ್ನೂ ಮಿಕ್ಸಿಯಲ್ಲಿ ನುಣ್ಣಗೆ ಪುಡಿಮಾಡಿಕೊಳ್ಳಿ.
 
ಮೆಣಸಿನಪುಡಿ ಮತ್ತು ಉಪ್ಪು ಎರಡನ್ನೂ ಪ್ರತ್ಯೇಕವಾಗಿ ಹುರಿದುಕೊಂಡು ಮಸಾಲೆ ಪೌಡರ್ ಗೆ ಸೇರಿಸಿ ಮಿಕ್ಸ್ ಮಾಡಿ. ಮಸಾಲೆ ಪೌಡರ್ ನ್ನು ಒಮ್ಮೆ ರುಚಿ ನೋಡಿಕೊಳ್ಳಿ. ಉಪ್ಪು ಸ್ವಲ್ಪ ಹೆಚ್ಚೆನಿಸುವಷ್ಟೇ ಇರಲಿ. ಮಾವಿನಕಾಯಿ ಉಪ್ಪನ್ನು ಹೀರಿಕೊಳ್ಳುವುದರಿಂದ ಉಪ್ಪಿನಕಾಯಿ ತಯಾರಾದ ನಂತರ ಸರಿಹೋಗುತ್ತದೆ.
 
ಒಂದು ಸ್ವಚ್ಛವಾದ ಒಣ ಜಾಡಿಯಲ್ಲಿ ಒಂದು ಪದರು ಮಾವಿನಕಾಯಿ ಹೋಳುಗಳನ್ನು ಹಾಕಿಕೊಳ್ಳಿ. ಅದರಮೇಲೆ ಒಂದು ಪದರು ಮಸಾಲೆ ಪೌಡರ್, ಮತ್ತೆ ಒಂದು ಪದರು ಮಾವಿನಕಾಯಿ ಹೀಗೆ ಮಾವಿನಕಾಯಿ ಹೋಳುಗಳು ಖಾಲಿಯಾಗುವವರೆಗೂ ಹಾಕಿ.
 
ಒಗ್ಗರಣೆ ಸೌಟಿನಲ್ಲಿ ಎಣ್ಣೆ ಕಾಯಿಸಿಕೊಂಡು ಮೆಂತ್ಯ, ಸಾಸಿವೆ, ಇಂಗು, ಅರಿಶಿನ ಹಾಕಿ ಒಗ್ಗರಣೆ ಮಾಡಿಕೊಳ್ಳಿ. ಈ ಮಿಶ್ರಣ ಪೂರ್ತಿ ತಣ್ಣಗಾದ ನಂತರ ಇದನ್ನು ಮಾವಿನಕಾಯಿ ಹೋಳಿನ ಮೇಲೆ ಸುರಿಯಿರಿ. ಗಾಳಿಯಾಡದಂತೆ ಬಿಗಿಯಾಗಿ ಜಾಡಿಯ ಮುಚ್ಚಳ ಹಾಕಿಡಿ. ಮರುದಿನ ಮುಚ್ಚಳ ತೆಗೆದು ಉಪ್ಪಿನಕಾಯಿಯನ್ನು ಒಂದು ಸ್ಪೂನ್ ಬಳಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದೇ ರೀತಿ 4 ದಿನಗಳವರೆಗೆ ದಿನವೂ ಒಮ್ಮೆ ಉಪ್ಪಿನಕಾಯಿಯನ್ನು ಕಲಸಿ ಮುಚ್ಚಳ ಹಾಕಿಡಿ.
 
ತಯಾರಿಸಿದ 4 - 5 ದಿನಗಳ ನಂತರ ಉಪ್ಪಿನಕಾಯಿಯನ್ನು ಬಳಸಬಹುದು. ಮೊಸರನ್ನದೊಡನೆ ಈ ಉಪ್ಪಿನಕಾಯಿ ತುಂಬ ರುಚಿ!


ಟಿಪ್ಸ್:
  • ಒಗ್ಗರಣೆ ಪೂರ್ತಿ ತಣ್ಣಗಾದ ನಂತರವೇ ಅದನ್ನು ಉಪ್ಪಿನಕಾಯಿಗೆ ಸೇರಿಸಿ. ಇಲ್ಲದಿದ್ದರೆ ಉಪ್ಪಿನಕಾಯಿ ಹೋಳುಗಳು ಬೆಂದಂತಾಗಿಬಿಡುತ್ತವೆ.
  • ಉಪ್ಪಿನಕಾಯಿ ತೆಗೆಯಲು ಒಣ ಚಮಚವನ್ನೇ ಬಳಸಿ. ನೀರಿನಂಶ ಸೇರಿದರೆ ಉಪ್ಪಿನಕಾಯಿ ಬೇಗ ಹಾಳಾಗುತ್ತದೆ.

ಕಾಮೆಂಟ್‌ಗಳು